ಪುರಂದರ ಗುರುಂ ವಂದೇ
ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||
1. ರತುನ ದೊರಕಿತಲ್ಲ ಎನಗೆ ದಿವ್ಯ ರತುನ ದೊರಕಿತಲ್ಲ
( ರಾಗ: ಬಿಲಹರಿ( ಭೀಮ್ ಪಲಾಸ್ ) ಆಟತಾಳ(ದೀಪಚಂದಿ) )
ರತುನ ದೊರಕಿತಲ್ಲ ಎನಗೆ ದಿವ್ಯ-
ರತುನ ದೊರಕಿತಲ್ಲ ||ಪ||
ರತುನ ದೊರಕಿತು ಎನ್ನ ಜನ್ಮ ಪ-
ವಿತ್ರವಾಯಿತು ಈ ದಿನವು ನಾ
ಯತುನಗೈವುತ ಬರುತಿರಲು ಪ್ರ-
ಯತನವಿಲ್ಲದೆ ವಿಜಯರಾಯರೆಂಬ ||ಅ. ಪ||
ಪಥದಿ ನಾ ಬರುತಿರಲು ಥಳಥಳವೆಂದು
ಅತಿಕಾಂತಿ ಝಳಪಿಸಲು ಬೆರಗಾಗುತ್ತ
ಅತಿಚೋದ್ಯವ ಕಾಣಲು ಸೇವಿಸುತಿರೆ
ಸತತ ಕರಪಿಡಿದಾದರಿಸಿ ಮನೋ
ರಥವ ಪೂರೈಸುತಲಿ ದಿವ್ಯ ಸ-
ನ್ಮತಿಯ ಪಾಲಿಸಿ ಮೋಕ್ಷ ಸುಪಥವ
ಅತಿಶಯದಿ ತೋರುತಲಿ ಪೊರೆಯುವ ||೧||
ಜ್ಞಾನವೆಂಬೋ ಪುತ್ಥಳಿ ಕಂಬಿಯಲಿ
ಅಣಿಮುತ್ತಿನ ಭಕ್ತಿಲಿ ಸುಕೃತಮಾತಾ
ನಾನಾ ವಿಧ್ಹ್ ವಳದಲಿ ಸೇರಿಸುತಿರೆ
ಪ್ರಾಣಪದಕವೆಂಬ ಮಾಲಾನು-
ಮಾನವಿಲ್ಲದೆ ಕೊರಳಿಗ್ಹಾಕುತ
ಗಾನದಿಂ ಕುಣಿಯುತಲಿ ಪಾಡುತ
ದೀನ ಜನರುದ್ಧಾರ ಗಯ್ಯುವ ||೨||
ಶೋಧಿಸಿ ಗ್ರಂಥಗಳ ಸುಳಾದಿಯ
ಮೋದದಿಂದಲಿ ಬಹಳ ಕವಿತೇ ಮಾಡಿ
ಸಾಧುಜನಕೆ ಸುಕಾಲ ಆನಂದವಿತ್ತು
ವಾದಿ ಜನರನು ಗೆದ್ದು ವಾದಿಸಿ
ಮಾಧವ ಜಗನ್ನಾಥವಿಠಲನ
ಪಾದಕಮಲಕೆ ಮಧುಪನಂದದಿ
ಸಾದರದಿ ತೋರಿಸುತ ಮೆರೆಯುವ ||೩||
2. ಒಂದು ಬಾರಿ ಸ್ಮರಣೆ ಸಾಲದೆ
ಒಂದು ಬಾರಿ ಸ್ಮರಣೆ ಸಾಲದೆ ಆನಂದತೀರ್ಥರ ಪೂರ್ಣಪ್ರಜ್ಞರ
ಸರ್ವಜ್ಞರಾಯರ ಮಧ್ವರಾಯರ||
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದು
ಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ||
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದು
ಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ||
ಆರುಮಂದಿ ವೈರಿಗಳನು ಸೇರಲೀಸದಂತೆ ಜರಿದು
ಧೀರನಾಗಿ ಹರಿಯಪಾದವ ಸೇರಬೇಕೆಂಬುವರಿಗೆ||
ಘೋರ ಸಂಸಾರಾಂಬುಧಿಗೆ ಪರಮ ಜ್ಞಾನವೆಂಬ ವಾಡೆ
ಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ||
ಹೀನ ಬುದ್ಧಿಯಿಂದ ಶ್ರೀಹಯವದನನ್ನ ಜರಿದು
ತಾನು ಬದುಕರಿಯಂದಿರಲು ತೋರಿ ಕೊಟ್ಟ ಮಧ್ವಮುನಿಯ||
3. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ ಜ || ಪ ||
ಗಂಗಳೊಳಗೆ ಮಂಗಳ ಮೂರುತಿ
ರಂಗನ ಶ್ರೀಪಾದಂಗಳ ನೋಡದ || ಅ ಪ ||
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲಿ ನಿಂದು
ಚಂದ್ರಪುಷ್ಕರಣಿ ಸಾನವ ಮಾಡಿ ಆ
ನಂದದಿಂದಲಿ ರಂಗನ ನೋಡದ || ೧ ||
ಹರಿಪಾದೋದಕ ಸಮ ಕಾವೇರಿ
ವಿರಜಾನದಿ ಸಾನವ ಮಾಡಿ
ಪರಮ ವೈಕುಂಠ ರಂಗಮಂದಿರ
ಪರವಾಸುದೇವನ ನೋಡದ || ೨ ||
ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರವ ಧರಿಸಿ
ತೇರನೇರಿ ಬೀದಿಲಿ
ಮೆರೆವ ರಂಗವಿಠಲನ ನೋಡದ || ೩ ||
4. ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಸಾರಿ ಭಜಿಸಿರೊ ಟೀಕಾರಾಯರಂಘ್ರಿಯ
ಘೋರಪಾತಕಾಂಭುದಿಯ ಪಾರು ಮಾಳ್ಪರಾ || ಪ ||
ಮೋದ ತೀರ್ಥರ ಮತವ ಸಾಧಿಸುವರಾ
ಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ ||
ಭಾಷ್ಯತತ್ವವ ವಿಸ್ತಾರ ಮಾಳ್ಪಾರಾ
ದೋಷ ದೂರಾರಾ ಆದಿ ಶೇಷವೇಷರಾ || ೨ ||
ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾ
ನೇಮ ನಿತ್ಯರ ನಿಷ್ಕಾಮನಾಪರಾ || ೩ ||
ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾ
ಸಾಕ್ಷಿ ಇಪ್ಪರಾ ಅಪೇಕ್ಷೆ ರಹಿತರಾ || ೪ ||
ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾ
ಕುಜನ ಭಂಜರಾ ದಿಗ್ವಿಜಯ ರಾಯಾರಾ || ೫ ||
ಸೂ : ಶ್ರೀ ಜಯತೀರ್ಥರು ಶ್ರೀ ಮಧ್ವರ ಕೃತಿಗಳಿಗೆ ಟೀಕೆ ಬರೆದವರು, ಮುಂದೆ ಟೀಕಾಚಾರ್ಯರೆಂದೆ ಪ್ರಸಿದ್ಧಿಯಾದರು, ಇವರ ವೃಂದಾವನ ಗುಲಬರ್ಗಾ ಹತ್ರ ಮಳಖೇಡದಲ್ಲಿ ಕಾಗಿನ ತೀರದಲ್ಲಿ ಇದೆ.
5. ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ವಾಯು ಹನುಮಂತ ಜಯ ಭೀಮ ಬಲವಂತ
ಜಯ ಪೂರ್ಣ ಮತಿವಂತ ಜಯ ಸಲಹೋ ಸಂತ
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆ
ನಂದದಲಿ ಮಾಡಿ ಕಪಿ ಬಲವ ಕೂಡಿ
ಸಿಂಧು ಲಂಘಿಸಿ ಕಳರ ವನವ ಭಂಗಿಸಿ ಸೀತೆ
ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿ
ಶ್ರೀ ಪಾರ್ಥಸಾರಥಿಯ ಭಜಕ ನೀನಾದೆ
ಪಾಪಿ ಮಾಗಧ ಬಕರ ಕೀಚಕ ಹಿಡಿಂಬಕರ
ಕೋಪದಿಂದಲಿ ತರಿದೆ ಮೂರ್ಜಗದಿ ಮೆರೆದೆ
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಅರಿಬಲವನು ಕುಟ್ಟಿ
ಉರಗ ಬಂಧದಿಂದ ಕಪಿವರ್ಯಾರು ಮೈ ಮರಿಯೆ
ಗಿರಿಯ ಸಂಜೀವನವ ತಂದು ಬದುಕಿಸಿದ
ಧುರದಲಿ ದುರ್ಯೋಧನನ ಬಲವನು ತಿಳಿದೆ
ಅರಿತು ದುಷ್ಯಾಸನನ ಒಡಲನು ಬಗಿದೆ
ಉರವ ತಪ್ಪಿಸಿ ಕೌರವನ ತೊಡೆಗಳ ಮುರಿದೆ
ಹರಿಯ ಕಿಂಕರ ದುರಂಧರಗಾರು ಸರಿಯೆ
ಕಲಿಯುಗದ ಬಲು ಕಳ್ಳರುದಿಸಿ ದುರ್ಮತಗಳನು
ಬಲಿಸಿ ಶ್ರೀ ಹರಿಯ ಗುಣಗಳನು ಮರೆಸಿ
ಕಲಿಯನುಸರಿಸಲು ಗುರುವಾಗಿ ಅವತರಿಸಿ
ಖಳರ ದುರ್ಮತ ಮುರಿದೆ ಶ್ರೀ ಕೃಷ್ಣ ಪರನೆಂದೆ
6. ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ತು೦ಗಾತೀರದಿ ನಿ೦ತ ಸುಯತಿವರನ್ಯಾರೇ ಪೇಳಮ್ಮಯ್ಯ
ಸ೦ಗೀತಪ್ರಿಯ ಮ೦ಗಳಸುಗುಣಿ ತರ೦ಗ ಮುನಿಕುಲೋತ್ತು೦ಗ ಪೇಳಮ್ಮ
ಚಲುವ ಸುಮುಖ ಫಣಿಯಲ್ಲಿ ತಿಲಕ ನಾಮಗಳು ಪೇಳಮ್ಮಯ್ಯ
ಜಲಜಮಣಿಯು ಕೊರಳೊಳು ತುಳಸಿಮಾಲೆಗಳು ಪೇಳಮ್ಮಯ್ಯ
ಸುಲಲಿತಕಮ೦ಡಲದ೦ಡವನ್ನೆ ಧರಿಸಿಹನು ಪೇಳಮ್ಮಯ್ಯ
ಖುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ || ೧ ||
ಸು೦ದರಚರಣರವಿಂದ ಸುಭಕುತಿಯಲಿ೦ದ ಪೇಳಮ್ಮಯ್ಯ
ವ೦ದಿಸಿ ಸ್ತುತಿಸುವ ಭೂಸುರರಿಂದ ಪೇಳಮ್ಮಯ್ಯ
ಚ೦ದದಿಲ೦ಕೃತಿಯಿಂದ ಶೋಭಿಸುವ ಆನಂದ ಪೇಳಮ್ಮಯ್ಯ
ಹಿ೦ದೆ ವ್ಯಾಸಮುನಿಯೆ೦ದೆನಿಸಿದ ಕರ್ಮ೦ದಿಗಳರಸಘದಿಂದ ರಹಿತನೆ || ೨ ||
ಅಭಿನವ ಜನಾರ್ಧನವಿಠ್ಠಲನ ಧ್ಯಾನಿಸುವ ಪೇಳಮ್ಮಯ್ಯ
ಅಭಿವ೦ದಿತರಿಗೆ ಅಖಿಲಾರ್ಥಗಳ ಸಲ್ಲಿಸುವ ಪೇಳಮ್ಮಯ್ಯ
ನಭಮಣಿಯ೦ದದಿ ಭೂಮಿಯಲ್ಲಿ ರಾಜಿಸುವ ಪೇಳಮ್ಮಯ್ಯ
ಶುಭಗುಣನಿಧಿ ಶ್ರೀ ರಾಘವೇ೦ದ್ರಯತಿ ಅಬುಜ ಭವಾ೦ಡದೊಳು ಪ್ರಬಲ ಕಾಣಮ್ಮ || ೩ ||
7. ಕೈಲಾಸ ವಾಸ
ರಾಗ : ಕಾಂಬೋದಿ ತಾಳ : ಖಂಡಛಾಪು
ಕೈಲಾಸವಾಸ ಗೌರೀಶ ಈಶಾ..
ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ... ಶಂಭೋ..... ||
ಅಹೋರಾತ್ರಿಯಲಿ ನಾನು ಅನುಜರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೋ ಮಹದೇವನೇ..
ಅಹಿಭೂಷಣನೆ ಎನ್ನ ಅವಗುಣಗಳೆಣಿಸದೆಲೆ
ವಿಹಿತ ಧರ್ಮದಿ ನಿಜ ವಿಷ್ಣು ಭಕುತಿಯನೆ ಕೊಡೊ ಶಂಭೋ... ||೧||
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲಾ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ...
ಧನುಜಗತ ಮದಹಾರಿ ದಂಡ ಪ್ರಣಾಮವ ಮಾಳ್ಪೆ
ಮನವು ನರಹರಿಯ ಚರಣದೊಳಗಿಡೋ ಶಂಭೋ.... ||೨||
ಭಾಗೀರಥೀಧರನೆ ಭಯವ ಪರಿಹರಿಸಯ್ಯಾ
ಲೇಸಾಗಿ ಒಲಿದೂ ಸಂತಸಸರ್ವ ದೇವಾ
ಭಾಗವತಗಳ ಪ್ರಿಯ ವಿಜಯವಿಠಲನಂಘ್ಹ್ರಿ
ಜಾಡು ಮಾಡದೆ ಭಜಿಪ ಭಾಗ್ಯವನು ಕೊಡೊ ಶಂಭೋ...||೩||
8. ಸದಾ ಎನ್ನ ಹೃದಯದಲ್ಲಿ.........
ರಾಗ : ದರ್ಬಾರ್ ಕಾನಡ ತಾಳ : ರೂಪಕ
ಸದಾ ಎನ್ನ ಹೃದಯದಲ್ಲಿ, ವಾಸ ಮಾಡೋ ಶ್ರೀ ಹರೀ..
ನಾದ ಮೂರ್ತಿ ನಿನ್ನ ಪಾದ, ಮೋದದಿಂದ ಭಜಿಸುವೆನೋ.....
ಙ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ...
ವೇಣುಗಾನ ಲೋಲನ ಕುಳ್ಳಿರಿಸಿ
ಙ್ಞಾನದಿಂದ ಭಜಿಸುವೇನೋ..... || ಸದಾ...||
ಭಕ್ತಿರಸವೆಂಬೋ...ಮುತ್ತು ಮಾಣಿಕ್ಯದಾ..
ಹರಿವಾಣದೀ....
ಮುಕ್ತನಾಗಬೇಕು ಎಂದು
ಮುತ್ತಿನ ಆರತಿ ಎತ್ತುವೇನೋ.......... || ಸದಾ..||
ನಿನ್ನ ನಾನು ಬಿಡುವನಲ್ಲ...
ಎನ್ನ ನೀನು ಬಿಡಲು ಸಲ್ಲ.......
ಘನ್ನ ಮಹಿಮ ವಿಜಯ ವಿಠಲ...
ನಿನ್ನ ಭಕುತರ ಕೇಳೋ ಸಲ್ಲ......... || ಸದಾ...||
9. ದಾಸನಾಗೋ ನೀ ಶಿಷ್ಯನಾಗೋ
(ರಾಗ ಕಾಂಭೋಜ ಏಕತಾಳ)
ದಾಸನಾಗೋ ನೀ ಶಿಷ್ಯನಾಗೋ ||ಪ||
ಏಸು ಕಾರ್ಯಂಗಳ (ಕಾಯಂಗಳ ?) ಕಳೆದು ಎಂಭತ್ತು -
ನಾಲ್ಕು ಲಕ್ಷ ಜೀವರಾಶಿಯನ್ನೆ ದಾಟಿ ||ಅ||
ಆಶಾಪಾಶ ಎಂಬೋ ಪರಮಾಬ್ಧಿಯೊಳಗೆ ಮುಳುಗಿ ಮಾಯಾ-
ಪಾಶಕ್ಕೊಳಗಾಗದೇ ಮಾನ್ಯನಾಗೊ , ನೀ ಧನ್ಯನಾಗೊ ||
ಮಾಯದ ಗೂಡಿಗೆ ಸಿಕ್ಕಿ ಘಡಿಘಡಿಘಡಿಸುತ್ತ ರಘು-
ರಾಮನೆಂಬೊ ವಸ್ತುವನ್ನು ಚೆನ್ನಾಗಿ ನಂಬೊ , ನೀನಾಗಿ ನಂಬೊ ||
ಈಗಲೋ ಆಗಲೋ ಇನ್ಯಾವಗಾಗಲೋ ಈ ಸಂಸಾರ
ಹೋಗುವ ಜೀವಕ್ಕೆ ನಿನಗೆ ತಂದೆ ಯಾರೊ , ತಾಯಿ ಯಾರೊ ||
ಇತ್ತಲೋ ಅತ್ತಲೋ ಇನ್ನೆತ್ತಲೋ ಈ ಸಂಸಾರ
ಮೃತ್ಯು ಇದು ನಿತ್ಯವೆಂದು ನಂಬಬೇಡೊ , ನೀ ನಂಬಬೇಡೊ ||
ಸೋರೆಯೊಳಗೆ ಮದ್ಯವ ತುಂಬಿ ಮೇಲೆ ಗಂಧಾಕ್ಷತೆ ಹಚ್ಚಿ
ಮೇಲೆ ಹುವ್ವಿನ ಸರವನೆ ಧರಿಸಿದಂತೆ , ನೀ ಮರೆಸಿದಂತೆ ||
ಮೂರುಬಾರಿ ಶರಣು ಮಾಡಿ ನೀರವೊಳಗೆ ಮುಳುಗಿ
ಪರನಾರೇರ ಮನಕ್ಕೆ ಸೆರೆಯ ಮಾಡಿ , ನೀ ಗುರಿಯ ಮಾಡಿ ||
ನಾರಾಯಣ ಅಚ್ಯುತ ಅನಂತ ಕೇಶವ ಕೃಷ್ಣನ್ನ ನಂಬಿ ಭಜಿಸೊ
ಪುರಂದರವಿಠಲನ ಲಂಡ ಜೀವವೆ , ನೀ ಭಂಡ ಜೀವವೆ ||
10. ಕುರುಡು ನಾಯಿ ತಾ ಸಂತೆಗೆ ಬಂತಂತೆ
(ರಾಗ ಪೂರ್ವಿ ಆದಿತಾಳ)
ಕುರುಡು ನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೋ ||ಪ||
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡಿರ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲವಂತೆ ||
ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ ||
ವೇದವಾದಗಳನೋದಿತಂತೆ
ಗಾದೆ ಮಾಡಿ ಬಿಟ್ಟಿತಂತೆ
ಹಾದಿ ತಪ್ಪಿ ನಡೆದು ಯಮನ
ಬಾಧೆಗೆ ತಾ ಗುರಿಯಾಯಿತಂತೆ ||
ನಾನಾ ಜನ್ಮವನೆತ್ತಿತಂತೆ
ಮಾನವನಾಗಿ ಹುಟ್ಟಿತಂತೆ
ಕಾನನಕಾನನ ತಿರುಗಿತಂತೆ
ತಾನು ತನ್ನನೆ ಮರೆಯಿತಂತೆ ||
ಮಂಗನ ಕೈಯ ಮಾಣಿಕ್ಯದಂತೆ
ಹಾಂಗೂ ಹೀಂಗೂ ಕಳೆದೀತಂತೆ
ರಂಗ ಪುರಂದರವಿಠಲನ ಮರೆತು
ಭಂಗ ಬಹಳ ಪಟ್ಟಿತಂತೆ ||
11. ತಾಳುವಿಕೆಗಿಂತ ತಪವು ಇಲ್ಲ
ತಾಳುವಿಕೆಗಿಂತ ತಪವು ಇಲ್ಲ
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ|
ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು
ಕಷ್ಟ ಬಂದರೆ ತಾಳು ಕಂಗೆಡದೆ ತಾಳು|
ನೆಟ್ಟ ಸಸಿ ಫಲ ಬರುವ ತನಕ ಶಾಂತಿಯ ತಾಳು
ಕಟ್ಟು ಬುತ್ತಿಯ ಮುಂದೆ ಉಣಲುಂಟು ತಾಳು||
ಹಳಿದು ಹಂಗಿಸುವಂಥ ಹಗೆಯ ಮಾತನು ತಾಳು
ಸುಳಿನುಡಿ ಕುಹಕ ಕುಮಂತ್ರವನು ತಾಳು|
ಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳು
ಹಲಧರಾನುಜನನ್ನು ಹೃದಯದಿ ತಾಳು||
ನಕ್ಕು ನುಡಿವರ ಮುಂದೆ ಮುಕ್ಕರಿಸದೆ ತಾಳು
ಅಕ್ಕಸವ ಮಾಡುವರ ಅಕ್ಕರದಿ ತಾಳು|
ಉಕ್ಕೋ ಹಾಲಿಗೆ ನೀರನಿಕ್ಕುವಂದದಿ ತಾಳು
ಪಕ್ಷೀಶ ಹಯವದನ ಶರಣೆಂದು ಬಾಳು||
12. ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ
( ರಾಗ ಶಂಕರಾಭರಣ ಅಟ ತಾಳ)
ಪೋಗದಿರೆಲೊ ರಂಗ ಬಾಗಿಲಿಂದಾಚೆಗೆ || ಪ ||
ಭಾಗವತರು ಕಂಡರೆತ್ತಿಕೊಂಡೊಯ್ವರೊ ||ಅ ||
ಸುರ ಮುನಿಗಳು ತಮ್ಮ ಹೃದಯಗಹ್ವರದಲ್ಲಿ
ಪರಮಾತ್ಮನ ಕಾಣದೆ ಅರಸುವರೊ
ದೊರಕದ ವಸ್ತುವಿಂದು ದೊರಕಿದು ತಮಗೆಂದು
ಹರುಷದಿಂದಲಿ ನಿನ್ನ ಕರೆದೆತ್ತಿಕೊಂಬರು ||
ಅಗಣಿತ ಗುಣ ನಿನ್ನ ಜಗದ ನಾರಿಯರೆಲ್ಲ
ಹಗೆಯಾಗಿ ನುಡಿವರೊ ಗೋಪಾಲನೆ
ಮಗುಗಳ ಮಾಣಿಕ್ಯ ತಗುಲಿತು ಕರಕೆಂದು
ಬೇಗದಿಂದಲಿ ಬಂದು ಬಿಗಿದಪ್ಪಿಕೊಂಬರೊ ||
ದಿಟ್ಟ ನಾರಿಯರೆಲ್ಲ ಇಷ್ಟವ ಸಲಿಸೆಂದು
ಅಟ್ಟಟ್ಟಿ ಬೆನ್ಹಿಂದೆ ತಿರುಗುವರೊ
ಸೃಷ್ಟೀಶ ಪುರಂದರವಿಠಲರಾಯನೆ
ಇಷ್ಟಿಷ್ಟು ಬೆಣ್ಣೆಯ ಕೊಟ್ಟೇನೋ ರಂಗಯ್ಯ ||
13. ನಂಬಿದೆ ನಿನ್ನ ಪಾದವ
(ರಾಗ ನವರೋಜ್ ಆದಿ ತಾಳ )
ನಂಬಿದೆ ನಿನ್ನ ಪಾದವ, ವೆಂಕಟರಮಣ
ನಂಬಿದೆ ನಿನ್ನ ಪಾದವ ||ಪ||
ನಂಬಿದೆ ನಿನ್ನ ಪಾದಾಂಬುಜಯುಗಳವ
ಚಂದದಿ ಸಲಹೋ ಮಂದರಧರನೆ ||ಅ||
ತಂದೆಯಾಗಿ ನೀನೇ ತಾಯಿಯು ನೀನೇ
ಬಂಧುಬಳಗವು ನೀನೆ
ಬಂದ ದುರಿತವೆಲ್ಲ ಹೊಂದಿಕೊಳ್ಳದಂತೆ
ಬಂದೆನ್ನ ಸಲಹೋ ಮುಕುಂದಮುರಾರಿ ||
ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು
ಘಕ್ಕನೆ ಜ್ಞಾನವ ಅಕ್ಕರದಿಂದಲೆ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸ ||
ಮರೆತು ಮಾಯದೊಳು ಮುಳುಗಿದೆ ಮಾಯ-
ವರಿತು ಅರಿಯದಾದೆ
ಮರೆಯದೆ ಎನ್ನನು ಸಲಹೊ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರವಿಠಲ ||
14. ಪವಮಾನ ಪವಮಾನ ಜಗದ ಪ್ರಾಣ
ರಾಗ: ತೋಡಿ ತ್ರಿವಿಡಿ ತಾಳ
ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ
ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|
ಹೇಮ ಕಚ್ಚುಟ ಉಪವೀತ ಧರಿಪ ಮಾರುತ
ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು
ವಜ್ರ ಶರೀರ ಗಂಭೀರ ಮುಕುಟಧರ
ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ
ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ
ಪ್ರಾಣ ಅಪಾನ ವ್ಯಾನೋದಾನ ಸಮಾನ
ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ
ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ
15. ಧವಳ ಗಂಗೆಯ ಗಂಗಾಧರ ಮಹಾಲಿಂಗ
ರಾಗ: ಮೋಹನ ತಾಳ: ಝಂಪಾ
ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರೋ ಗುರುಕುಲೋತ್ತುಂಗಾ
ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವಾ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಚುತಗಲ್ಲದ ಅಸುರರ ಬಡಿವಾ
ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ
ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ
ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯವಲ್ಲವೊ ನಾನು ಗುರುವೆಂಬೆ ನಿನ್ನ
ಇನ್ನಾದರೂ ತೋರೋ ಧೀರ ಮುಕ್ಕಣ್ಣ
16. ಕೈಲಾಸವಾಸ ಗೌರೀಶ ಈಶ
ರಚನೆ -ವಿಜಯದಾಸರು
ಕೈಲಾಸವಾಸ ಗೌರೀಶ ಈಶ
ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ||
ಅಹೋರಾತ್ರಿಯಲ್ಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡೊ, ಶಂಭೋ ||೧||
ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ
ಆನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜ ಮದಹಾರಿ ದಂಡ ಪ್ರಣಾಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ, ಶಂಭೋ ||೨||
ಭಾಗೀರಥಿ ಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ
ಭಾಗವತ ಜನ ಪ್ರಿಯ ವಿಜಯವಿಠಲನಂಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನು ಕೊಡೊ, ಶಂಭೋ ||೩||
17. ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀಹರಿ
ಸದಾ ಎನ್ನ ಹೃದಯದಲ್ಲಿ
ವಾಸಮಾಡೊ ಶ್ರೀಹರಿ ||ಪಲ್ಲವಿ||
ನಾದಮೂರ್ತಿ ನಿನ್ನ ಪಾದ
ಮೋದದಿಂದ ಭಜಿಸುವೆನು ||ಅನು||
ಜ್ಞಾನವೆಂಬ ನವರತ್ನದ
ಮಂಟಪದ ಮಧ್ಯದಲಿ
ವೇಣುಲೋಲನ ಕುಳ್ಳಿರಿಸಿ
ಮೋದದಿಂದ ಭಜಿಸುವೆನು ||೧||
ಭಕ್ತಿ ರಸವೆಂಬ ಮುದ್ದು
ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು
ಮುತ್ತಿನಾರತಿ ಎತ್ತುವೆನು ||೨||
ನಿನ್ನ ನಾನು ಬಿಡುವನಲ್ಲ
ಎನ್ನ ನೀನು ಬಿಡಲು ಸಲ್ಲ
ಘನ್ನ ಮೂರುತಿ ವಿಜಯವಿಠಲ
ಕೇಳೊ ನಿನ್ನ ಭಕ್ತರ ಸೊಲ್ಲ ||೩||
18. ಕಂಡೆ ನಾ ಗೋವಿಂದನ
(ರಾಗ ಪಂತುವರಾಳಿ ಅಟತಾಳ )
ಕಂಡೆ ನಾ ಗೋವಿಂದನ
ಪುಂಡರೀಕಾಕ್ಷ ಪಾಂಡವಪಕ್ಷ ಕೃಷ್ಣನ ||ಪ ||
ಕೇಶವ ನಾರಾಯಣ ಶ್ರೀಕೃಷ್ಣನ
ವಾಸುದೇವ ಅಚ್ಯುತಾನಂತನ
ಸಾಸಿರ ನಾಮದ ಶ್ರೀಹೃಷೀಕೇಶನ
ಶೇಷಶಯನ ನಮ್ಮ ವಸುದೇವಸುತನ ||
ಮಾಧವ ಮಧುಸೂದನ ತ್ರಿವಿಕ್ರಮ
ಯಾದವಕುಲವಂದ್ಯನ
ವೇದಾಂತವೇದ್ಯನ ಇಂದಿರಾರಮಣನ
ಆದಿಮೂರುತಿ ಪ್ರಹ್ಲಾದವರದನ ||
ಪುರುಷೋತ್ತಮ ನರಹರಿ ಶ್ರೀಕೃಷ್ಣನ
ಶರಣಾಗತರಕ್ಷಕನ
ಕರುಣಾಕರ ನಮ್ಮ ಪುರಂದರವಿಠಲನ
ನೆರೆ ನಂಬಿದೆನು ಬೇಲೂರ ಚೆನ್ನಿಗನ ||
19. ಇದು ಭಾಗ್ಯವಿದು ಭಾಗ್ಯವಿದು
(ರಾಗ ಕಾಂಭೋಜ ಝಂಪೆ ತಾಳ)
ಇದು ಭಾಗ್ಯವಿದು ಭಾಗ್ಯವಿದು ಭಾಗ್ಯವಯ್ಯ ||ಪ||
ಪದುಮನಾಭನ ಪಾದಭಜನೆ ಸುಖವಯ್ಯ ||ಅ||
ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ ||
ಬುದ್ಧಿಯೊಳು ತನುಮನವ ತಿದ್ದಿಕೊಳ್ಳಲುಬೇಕು
ಮುದ್ದಾಗಿರಬೇಕು ಮುನಿಯೋಗಿಗಳಿಗೆ
ಮಧ್ವಮತಾಬ್ಧಿಯೊಳು ಮೀನಾಗಿರಲುಬೇಕು
ಶುದ್ಧನಾಗಿರಬೇಕು ಕರಣತ್ರಯಗಳಲಿ ||
ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು
ನಿಶಿಹಗಲು ಶ್ರೀಹರಿಯ ನೆನೆಯಬೇಕು
ವಸುಧೇಶ ಪುರಂದರವಿಠಲರಾಯನ
ಹಸನಾದ ದಾಸರ ಸೇವಿಸಲುಬೇಕು ||
Subscribe to:
Post Comments (Atom)
thank u for these lyrics.. post more please and also specify which kruthi belongs to which dasaru. cheers:)
ReplyDeleteIt is a welcome step. Kindly try to post more and avoid repeats like 7 & 8 repeated at 16 & 17. May Lord Hari continue to shower his love on you. Sanjeev Mogal
ReplyDeleteits very nice....
ReplyDeleteits really wonderful,cool place, please upload mp3 format of dasara padagalu, i like "daasana maadiko enna.."
ReplyDeletegood taste udaya, keep going.
Sir,
ReplyDeleteninyako ninna hangyako sigbahuda?
Seema Deepak
very very awesome great thongs doings great coool ssongs i love a lot :-) dhanyavdhgalu
ReplyDeleteದಾಸ ಶ್ರೇಷ್ಠರ ಈ ಸಂಗ್ರಹ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ReplyDelete