Sunday, November 14, 2010

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆಯ ಓದ ಬಯಸುತ ನೀನು

ಬೆಲೆ ಎಷ್ಟು ಎಂದು ಕೇಳುತಿಹೆಯ ಹುಚ್ಚ

ಹಗಲಿರುಳು ದುಡಿದರೂ ಹಲ ಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆ ವೆಚ್ಚ!

ಬೆವರ ಹನಿಯಲಿ ಹಲವು ಕಣ್ಣೀರಿನಲಿ ಕೆಲವು

ನೆತ್ತರರಲಿ ಬರೆದುದಕೆ ಲೆಕ್ಕವಿಲ್ಲ

ಚಿತ್ರಚಿತ್ರಾಕ್ಷರದ ಲಕ್ಷಪತ್ರಗಳುಂಟು

ನಕ್ಷತ್ರ ಮರೆತು ಓದುತಿವೆ ಮರೆತು ಸೊಲ್ಲ

ಏನಿಹುದೋ ಎಂತಿಹುದೋ ಸಂಸಾರ ಸಾರ

ಕಂಡವರು ಯಾರು ಅದರ ಅಂತಃಪಾರ

ಹೃದಯ ಸಂಪುಟದಲ್ಲಿ ಒಲವ ಲೆಕ್ಕಣಿಕೆ

ಮಾಡಿ ಬರೆಯಲೋ ಹುಡುಗ ನಿನ್ನ ಒಕ್ಕಣಿಕೆ

-ಅಂಬಿಕಾತನಯದತ್ತ

ಪ್ರೀತಿ!...

ಈ ಎರಡು ಶಬ್ಧವನ್ನು ಕೇಳುತ್ತಿರುವಂತೆಯೇ ಅದೇನು ಪುಳಕ!

ನಮ್ಮ ಕವಿಗಳು, ಕಥೆಗಾರರು, ಕಾದಂಬರೀಕಾರರು ಸಾವಿರಾರು ವರ್ಷಗಳಿಂದ ಈ ಪ್ರೀತಿ ಎಂದರೆ ಏನು ಎಂಬುದನ್ನು ಶಬ್ಧಗಳಲ್ಲಿ ತಿಳಿಸಲು ಹೆಣಗಾಡಿರುವರು. ಆದರೂ ನಮಗೆ ಪ್ರೀತಿಯ ಸಾಕ್ಷಾತ್ಕಾರವಾಗಿಲ್ಲ. ಅಂಬಿಕಾತನಯದತ್ತರ ಮಾತನ್ನು ನಂಬುವುದಾದರೆ, ಪ್ರೀತಿಯ ಒಡಲಾಳವನ್ನು ಅರಿಯುವುದಂತಿರಲಿ, ಹಗಲಿರುಳು ದುಡಿದರೂ, ಹಲವು ಜನ್ಮಗಳನ್ನು ಕಳೆದರೂ, ಪ್ರೀತಿಗೆ ಅಗತ್ಯವಾದ ಅಂಚೆ ವೆಚ್ಚವನ್ನು ಸಂಪಾದಿಸಲು ನಮ್ಮಿಂದ ಆಗುವುದಿಲ್ಲವಂತೆ!

ಪ್ರೀತಿ ಎನ್ನುವುದು ಅಷ್ಟು ಹಿರಿದೆ? ಅಷ್ಟು ನಿಗೂಢವೆ!?

ಏನು ಹೇಳುತ್ತದೆ ಪ್ರೀತಿಯ ಬಗ್ಗೆ ನಮ್ಮ ವಿಜ್ಞಾನ?

ಬಗೆ ಬಗೆ:

ಪ್ರೀತಿಯ ಆಳ ಹಾಗೂ ವ್ಯಾಪ್ತಿ ದೊಡ್ಡದು. ನಮ್ಮ ಸಮಾಜದಲ್ಲಿ ನಾವು ಹಲವು ರೀತಿಯ ಪ್ರೀತಿಯನ್ನು ಕಾಣುತ್ತೇವೆ.

ತಾಯಿ ತನ್ನ ಮಗುವನ್ನು ಪ್ರೀತಿಸುತ್ತಾಳೆ.

ಅಣ್ಣ ತನ್ನ ತಂಗಿಯನ್ನು ಪ್ರೀತಿಸುತ್ತಾನೆ.

ಹುಡುಗ ಹುಡುಗಿಯನ್ನು ಪ್ರೀತಿಸುತ್ತಾನೆ

ವಿಟ ವೇಶ್ಯೆಯ ಜೊತೆ ಸಂಭೋಗ ನಡೆಸುತ್ತಾನೆ

ನಾವು ನಮ್ಮ ದೇಶವನ್ನು ಪ್ರೀತಿಸುತ್ತೇವೆ.

ಅಕ್ಕ ಮಹಾದೇವಿ ಮಲ್ಲಿಕಾರ್ಜುನನನ್ನು ಪ್ರೀತಿಸುತ್ತಾಳೆ; ಹೆಳವನಕಟ್ಟೆ ಗಿರಿಯಮ್ಮ, ಮೀರಾ ಕೃಷ್ಣನನ್ನು ಪ್ರೀತಿಸುತ್ತಾರೆ....ಬೀಬಿ ನಾಂಚಾರಿ ಚೆಲುವನಾರಾಯಣನನ್ನು ಪ್ರೀತಿಸುತ್ತಾಳೆ!

ಕೆಲವು ಸಂಸ್ಕೃತಿಗಳಲ್ಲಿ ಹತ್ತು ವಿಧಕ್ಕೂ ಹೆಚ್ಚಿನ ಪ್ರೀತಿಯನ್ನು ಕಾಣಬಹುದಂತೆ!



ಪ್ರಸ್ತುತ ನಾವು ಹುಡುಗ-ಹುಡುಗಿಯ ನಡುವಿನ ಪ್ರೇಮದ ಪರಿಯನ್ನಷ್ಟೇ ನೋಡೋಣ.

ಪ್ರೀತಿಯನ್ನು ಅಧ್ಯಯನ ಮಾಡುವ ವಿಜ್ಞಾನ ಶಾಖೆಯಿನ್ನೂ ಅಂಕುರವೊಡೆಯುತ್ತದೆ. ಈ ಶಾಖೆಗೆ ಇನ್ನೂ ಶಾಸ್ತ್ರೀಯವಾಗಿ ನಾಮಕರಣವಾಗಬೇಕಿದೆ. ಆದರೆ ವಿಜ್ಞಾನಿಗಳು ಪ್ರೀತಿಯ ವೈಜ್ಞಾನಿಕ ವಿವರಣೆಯನ್ನು ಆಗಲೇ ಹುಡುಕಲಾರಂಭಿಸಿದ್ದಾರೆ. ಪ್ರೀತಿಯ ಭಿನ್ನ ಸ್ವರೂಪಗಳಿಗೆ ಕಾರಣವನ್ನು ತಿಳಿಯಲು ಮಾನವನ ಮಿದುಳಿನೊಳಗೆ ಇಣುಕಿ ನೋಡುತ್ತಿದ್ದಾರೆ. ಪ್ರೀತಿಯ ನೂರು ಮುಖದಲ್ಲಿ ಯಾವ ಯಾವ ರಾಸಾಯನಿಕಗಳು ಪಾಲುಗೊಳ್ಳುತ್ತವೆ? ಅವು ಹೇಗೆ ಬದಲಾಗುತ್ತವೆ? ಏಕಾಗುತ್ತವೆ? ಪ್ರೀತಿಯಲ್ಲಿ ಸಂಗಾತಿಯನ್ನು ಒಲಿಸಿಕೊಳ್ಳಲು ಏನು ಮಾಡಬೇಕು? ಎಲ್ಲ ಪ್ರೀತಿಯು ಏಕೆ ಸುಖಾಂತ್ಯವಾಗುವುದಿಲ್ಲ? ಪ್ರೀತಿಯ ವೈಫಲ್ಯಕ್ಕೆ ಕಾರಣಗಳೇನು?...ಈ ಪ್ರೀತಿ ಎನ್ನುವುದು ಜೀವ ವಿಕಾಸದಲ್ಲಿ ಬೆಳೆದು ಬಂದ ಪರಿ ಎಂತಹದ್ದು? ಈ ಎಲ್ಲ ಚಿರಕಾಲದ ಪ್ರಶ್ನೆಗಳಿಗೆ ವೈಜ್ಞಾನಿಕ ವಿವರಣೆಯನ್ನು ಹುಡುಕುತ್ತಾ, ಆಳವಾಗಿ ನಮ್ಮನ್ನು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದೇವೆ.

ಸಂಚು:

ಪ್ರೀತಿ ಎನ್ನುವುದು ಪ್ರಕೃತಿಯು ಹೂಡಿದ ಸಂಚು. ಉತ್ತಮ ಗುಣ ಲಕ್ಷಣಗಳನ್ನು ಹೊಂದಿರುವ ಹುಡುಗ ಮತ್ತು ಒಟ್ಟಿಗೆ ಬರಲಿ; ಸಂತಾನ ವರ್ಧನಾ ಕಾರ್ಯದಲ್ಲಿ ಪಾಲುಗೊಳ್ಳಲಿ; ಉತ್ತಮ ಸಂತಾನವನ್ನು ಸೃಜಿಸಲಿ-ಇದು ಪ್ರಕೃತಿಯ ಏಕಮಾತ್ರ ಹೆಬ್ಬಯಕೆ. ಪ್ರೀತಿ-ಪ್ರೇಮ-ಕಾಮಗಳ ಹಿಂದಿರುವ ಘನ ಉದ್ದೇಶ ಉತ್ತಮ ಸಂತಾನ ವರ್ಧನೆ ಮಾತ್ರ!

ಏನಾಗುತ್ತದೆ?

ಹುಡುಗ ಹುಡುಗಿಯರು ಒಬ್ಬರನ್ನೊಬ್ಬರು ನೋಡುತ್ತಾರೆ. ಕಣ್ಣು ಕಣ್ಣು ಕಲೆಯುತ್ತವೆ. ಕಲೆಯುತ್ತಿರುವಂತೆಯೇ ಅವರ ಮನಸ್ಸು-ಮಿದುಳಿನಲ್ಲಿ ಅಸಂಖ್ಯ ರಾಸಾಯನಿಕಗಳು ಉತ್ಪಾದನೆಯಾಗುತ್ತವೆ. ಮಿದುಳಿನ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಿಯುತ್ತವೆ. ಮಿದುಳಿನಿಂದ ದೇಹದ ವಿವಿಧ ಅಂಗಗಳಿಗೆ ನರಸಂಜ್ಞೆಗಳು ಸಾಗುತ್ತವೆ. ಪಂಚೇಂದ್ರಿಯಗಳು ಮತ್ತಷ್ಟು ಮಾಹಿತಿಯನ್ನು ಮಿದುಳಿಗೆ ಕಳುಹಿಸುತ್ತವೆ. ಮಿದುಳು ಮತ್ತೆ ನರ ರಸಾಯನಿಕಗಳನ್ನು ಉತ್ಪಾದಿಸಿ ಹರಿಸುತ್ತವೆ...

ನಮಗೆ ಎಲ್ಲವೂ ಗೋಜಲು ಗೋಜಲು. ಆದರೆ ಮಿದುಳು ಮಾತ್ರ ಎಲ್ಲ ಕೆಲಸವನ್ನು ಕ್ರಮಬದ್ಧವಾಗಿ ಹಾಗೂ ಕರಾರುವಾಕ್ಕಾಗಿ ಮಾಡುತ್ತಾ ನಡೆಯುತ್ತದೆ. ಆದರೆ...ಮಿದುಳು ಏನು ಕೆಲಸ ಮಾಡುತ್ತದೆ???

ಮಿದುಳಿನಲ್ಲಿ ಏನಾಗುತ್ತದೆ?

ಲವ್ ಅಟ್ ಫಸ್ಟ್ ಸೈಟ್!

ಒಬ್ಬ ಹುಡುಗ-ಹುಡುಗಿಯರಲ್ಲಿ ಪರಸ್ಪರ ಪ್ರೀತಿ ಮೊಳೆಯುವುದೇ ಇಲ್ಲವೇ ಎಂಬುದು ನಿರ್ಧಾರವಾಗಲು ಒಂದೂವರೆ ನಿಮಿಷದಿಂದ ನಾಲ್ಕು ನಿಮಿಷಗಳ ಕಾಲ ಸಾಕಾಗುತ್ತದೆಯಂತೆ! ಅಂದರೆ ನಮ್ಮ ಕವಿಗಳು ಹೇಳುವ ಹಾಗೆ ‘ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತದೆ‘ ಎನ್ನುವ ಹೇಳಿಕೆ ಸುಳ್ಳಿರಲಾರದು. ಅದು ಕವಿಯ ಕಲ್ಪನೆಯಾಗಿರಲಾರದು. ಅತಿ ರಂಜಿತ ವಿವರಣೆಯೂ ಆಗಿರಲಾರದು. ಅದರಲ್ಲಿ ಸತ್ಯ ಇರಲೇಬೇಕು!

ಹುಡುಗ-ಹುಡುಗಿಯರು ಚಲನಚಿತ್ರದಲ್ಲಿ ‘ಐ ಲವ್ ಯು ಎಂದು ಹೇಳುವ ಮೂಲಕ ಪರಸ್ಪರ ಪ್ರೀತಿಸುತ್ತಿರುವುದನ್ನು ಹೇಳಬಹುದು. ಆದರೆ ನಿಜ ಜೀವನದಲ್ಲಿ ಯಾರಾದರೂ ಹೀಗೆ ಹೇಳುತ್ತಾರೆಯೆ ಎಂಬುದರ ಬಗ್ಗೆ ನನಗೆ ಅನುಮಾನವಿದೆ. ಅಂತಹ ಪ್ರಕರಣಗಳು ಅಪರೂಪವೆಂದೇ ನನ್ನ ಭಾವನೆ. ಪ್ರೀತಿಯ ಅರುಣೋದಯವಾಗಿರುವುದನ್ನು ಮಾತಿಗಿಂತ ಇತರ ಲಕ್ಷಣಗಳು ಸೂಚಿಸುತ್ತವೆ ಎಂದು ಅನಿಸುತ್ತದೆ. ಈ ವಿಷಯದಲ್ಲಿ ವಿಜ್ಞಾನಿಗಳು ನೀಡುವ ಅಂಕಿ-ಅಂಶಗಳನ್ನು ನೋಡಿ.

ಪ್ರೇಮಿಗಳ ಪ್ರೀತಿಯ ಬಗ್ಗೆ ೫೫% ರಷ್ಟು ಮಾಹಿತಿಯನ್ನು ದೈಹಿಕ ಹಾವ-ಭಾವಗಳು ತಿಳಿಸುತ್ತವೆಯಂತೆ.

೩೮% ರಷ್ಟು ಮಾಹಿತಿಯನ್ನು ಧ್ವನಿ, ಧ್ವನಿಯಲ್ಲಿರುವ ಭಾವ ಹಾಗೂ ಮಾತನಾಡುವ ವೇಗ ನಿರ್ಧರಿಸುತ್ತದೆಯಂತೆ.

ಪ್ರೀತಿಯು ಕೇವಲ ೭% ರಷ್ಟು ಮಾತ್ರ ಮಾತಿನ ಮೂಲಕ ರವಾನೆಯಾಗುವುದಂತೆ.

ಮೂರು ಹಂತಗಳು:

ಪ್ರೀತಿಯು ಮೂರು ಹಂತಗಳಲ್ಲಿ ಬೆಳೆಯುತ್ತದೆ ಎನ್ನುತ್ತಾರೆ ಅಮೆರಿಕದ ರುಟ್ಗರ್ಸ್ ವಿಶ್ವವಿದ್ಯಾಲಯದ ಶ್ರೀಮತಿ ಹೆಲೆನ್ ಫಿಶರ್. ಆ ಮೂರು ಹಂತಗಳು ಕಾಮತೃಷೆ (ಲಸ್ಟ್), ಆಕರ್ಷಣೆ (ಅಟ್ರಾಕ್ಷನ್) ಮತ್ತು ಭಾವಾನುಬಂಧ (ಅಟಾಚ್‌ಮೆಂಟ್).

ಹಂತ ೧: ಕಾಮತೃಷೆ:

ಒಬ್ಬ ಹುಡುಗ ಒಂದು ಹುಡುಗಿಯನ್ನು ನೋಡಿದಾಗ, ಒಬ್ಬ ಹುಡುಗಿ ಒಂದು ಹುಡುಗನನ್ನು ನೋಡಿದಾಗ, ಇವನು/ಇವಳು ನನಗೆ ಸಮರ್ಥವಾದ ಸಂತಾನವನ್ನು ನೀಡಬಲ್ಲನೆ ಎಂಬ ಪ್ರಶ್ನೆ ಅವರ ಮನಸ್ಸಿನಲ್ಲಿ ಹಾದುಹೋಗುತ್ತದೆ. ಇಂತಹ ಭಾವನೆ ಇಬ್ಬರ ಮನಸ್ಸಿನಲ್ಲಿ ಮೂಡುವಾಗ, ಯಾವುದೇ ಪ್ರೀತಿಯ ಸೋಂಕಿರುವುದಿಲ್ಲ. ಇಲ್ಲಿ ಕೇವಲ ಕೇವಲ ಕಾಮತೃಷೆ ಮಾತ್ರ ಇರುತ್ತದೆ. ಈ ಭಾವನೆ ಎಲ್ಲಾ ಅಪರಿಚಿತ ಗಂಡು-ಹೆಣ್ಣುಗಳಲ್ಲಿ ಸಹಜವಾಗಿ ಮೂಡುತ್ತದೆ. ಇಂತಹ ಭಾವನೆ ಮೂಡಲು ಸ್ತ್ರೀಲಕ್ಷಣವರ್ಧಕ ಹಾರ್ಮೋನುಗಳು (ಈಸ್ಟ್ರೋಜನ್ಸ್) ಹಾಗೂ ಪುರುಷಲಕ್ಷu ವರ್ಧಕ ಹಾರ್ಮೋನುಗಳೆರಡೂ ಕಾರಣವಾಗಿರುತ್ತವೆ.

ಹಂತ ೨: ಆಕರ್ಷಣೆ:

ಹುಡುಗ-ಹುಡುಗಿಯರು ಒಬ್ಬರನ್ನೊಬ್ಬರು ನೋಡಲು-ಮಾತನಾಡಲು ಸ್ವಲ್ಪ ಅವಕಾಶ ದೊರೆತರೆ ಸಾಕು, ಎರಡನೆಯ ಹಂತ ಆರಂಭವಾಗುತ್ತದೆ. ಈ ಹಂತವು ರೂಪುಗೊಳ್ಳಲು ಒಂದೂವರೆ ನಿಮಿಷದಿಂದ ನಾಲ್ಕು ನಿಮಿಷಗಳು ಸಾಕು. ಈ ಅವಧಿಯಲ್ಲಿ ನಾಲ್ಕು ಪ್ರಮುS ಹಾರ್ಮೋನುಗಳು ಪಾಲುಗೊಳ್ಳುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಆ ಹಾರ್ಮೋನುಗಳೇ ಅಡ್ರಿನಾಲಿನ್, ಕಾರ್ಟಿಸಾಲ್, ಡೋಪಮಿನ್ ಹಾಗೂ ಸೆರಟೋನಿನ್.

ಅಡ್ರಿನಾಲಿನ್: ನಿಮ್ಮ ಮೆಚ್ಚಿನ ಸಂಗಾತಿಯನ್ನು ನೋಡಿದ ಕೂಡಲೇ ಅಥವ ನಮ್ಮ ಚಲನಚಿತ್ರಗಳಲ್ಲಿ ತೋರಿಸುವ ಹಾಗೆ ನಾಯಕ-ನಾಯಕಿ ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುತ್ತಲೇ, ಒಂದು ವಿವರಿಸಲಾಗದಂತಹ ಒತ್ತಡ (ಸ್ಟ್ರೆಸ್) ಇಬ್ಬರಲ್ಲೂ ಮೂಡುತ್ತದೆ. ಒತ್ತಡ ಮೂಡುತ್ತಿರುವಂತೆಯೇ ಒತ್ತಡ ಹಾರ್ಮೋನುಗಳಾದ ಅಡ್ರಿನಾಲಿನ್ ಹಾಗೂ ಕಾರ್ಟಿಸಾಲ್ ಒಮ್ಮೆಲೆ ಬಿಡುಗಡೆಯಾಗುತ್ತವೆ. ನಿಮಗರಿವಿಲ್ಲದಂತೆಯೇ ನೀವು ಬೆವರುತ್ತೀರಿ. ಎದೆ ಡವ ಡವ ಎಂದು ಹೊಡೆದುಕೊಳ್ಳುತ್ತದೆ. ಬಾಯಿ ಒಣಗುತ್ತದೆ. ಮಾತು ಹೊರಡುವುದಿಲ್ಲ. ಹೊರಟರೂ ತೊದಲುತ್ತದೆ...ಇವೆಲ್ಲವೂ ಸಹಾ ಅಡ್ರಿನಾಲಿನ್ ಹಾರ್ಮೋನಿನ ಲೀಲೆ!

ಡೋಪಮಿನ್: ಓ ನನ್ನ ಸಖಿ! ನಿನಗೇನು ಬೇಕು ಹೇಳು? ಭೂಮ್ಯಾಕಾಶಗಳನ್ನು ಒಂದು ಮಾಡಲೇ, ಬಾನಿನಲ್ಲಿರುವ ತಾರೆಗಳ ಕಿತ್ತು ತರಲೆ? ಏಳು ಸಮುದ್ರಗಳ ದಾಟಿ ಅಲ್ಲಿ ನಿನಗಾಗಿ ಅರಳಿರುವ ಗುಲಾಬಿಯನ್ನು ಕೊಯ್ದು ತರಲೆ?...ಹೀಗೆಲ್ಲ ಪ್ರೀತಿಗೆ ತುತ್ತಾದವರು ಮಾತನಾಡುತ್ತರಂತೆ! ಅಣ್ಣಾವರು ಹಾಡಿದ ಹಾಗೆ ‘ಅಕಾಶವೇ ಬೀಳಲಿ ಮೇಲೆ, ನಾನೆಂದು ನಿನ್ನವನು ಎಂದು ಹಾಡಿದರೂ ಹಾಡಬಹುದು. ಹೀಗೆ ಹಾಡುವಂತೆ-ಮಾತನಾಡುವಂತೆ ಪ್ರಚೋದನೆಯನ್ನು ನೀಡುತ್ತದೆ ಡೋಪಮಿನ್ ಹಾರ್ಮೋನ್! ಪ್ರೀತಿಸುವ ಎಳೇ ಜೀವಗಳಿಗೆ ಈ ಜಗವನ್ನೇ ಎದುರಿಸಿ ನಿಲ್ಲುವ ಧೈರ್ಯ ಬರುತ್ತದೆ. ಧರ್ಮ, ಜಾತಿ, ಪಂಗಡ, ಭಾಷೆ, ಅಪ್ಪ, ಅಮ್ಮ, ಹಣ, ಆಸ್ತಿ, ಅಂತಸ್ತು ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಕೆಚ್ಚು ಬರುತ್ತದೆ. ಈ ಎಲ್ಲವನ್ನು ಡೋಪಮಿನ್ ಕೊಡುತ್ತದೆ. ಹೆಲೆನ್ ಫಿಶರ್ ಅವರು ಪ್ರೀತಿಯ ಎರಡನೆಯ ಹಂತದಲ್ಲಿದ್ದ ಹಲವು ಪ್ರೇಮಿಗಳನ್ನು ಕರೆದು ಅವರ ಮಿದುಳನ್ನು ಅಧ್ಯಯನ ಮಾಡಿದರು. ಇವರಲ್ಲಿ ಡೋಪಮಿನ್ ಜನಸಾಮಾನ್ಯರಿಗಿಂತ ಅಧಿಕವಾಗಿತ್ತು. ಮಿದುಳಿನ ತುಂಬಾ ಡೋಪಮಿನ್ನಿನದೇ ಕಾರುಬಾರು! ಈ ರಾಸಾಯನಿಕವು ನಮ್ಮಲ್ಲಿ ಆಸೆಯನ್ನು ಹುಟ್ಟಿಸಿ, ಆಸೆಯನ್ನು ಪೂರೈಸಿಕೊಂಡು ತೃಪ್ತಿಯನ್ನು ಅನುಭವಿಸಲು (ಡಿಸೈರ್-ರಿವಾರ್ಡ್) ಹಾತೊರೆಯುತ್ತದೆ! ಸುಖವನ್ನು ನೀಡುತ್ತದೆ. ಹಾಗಾಗಿ ತೃಪ್ತಿಯ ಸುಖಾನುಭಾವವನ್ನು ಪಡೆಯಲು ಆಕಾಶದಲ್ಲಿರುವ ನಕ್ಷತ್ರಗಳನ್ನು ಕಿತ್ತು ತರಲು (ಅಂದರೆ ಎಂತಹ ಮೋಡು-ಬಂಡು ಸಾಹಸ ಮಾಡಲು) ಸಿದ್ಧವಾಗಿಸುತ್ತದೆ!

ಸೆರಟೋನಿನ್: ‘ಒಲವಿನಾ ಪ್ರಿಯಲತೆ...ಅವಳದೇ ಚಿಂತೆ...ಅವಳ ಮಾತೆ..ಮಧುರ ಗೀತೆ...ಅವಳೆ ಎನ್ನಾ ದೇವತೆ!‘...ಪ್ರೀತಿ ಪ್ರೇಮದಲ್ಲಿ ಬಿದ್ದವರಿಗೆ ವಿರಹ ಅನಿವಾರ್ಯ. ವಿರಹಾ ನೂರು ನೂರು ತರಹ... ಪ್ರೇಮಿಗಳು ತಮ್ಮ ಸಂಗಾತಿಯನ್ನೆ ಮತ್ತೆ ಮತ್ತೆ ನೆನಪಿಸಿಕೊಂಡು, ಸಾನಿಧ್ಯಕ್ಕೆ ಹಾತೊರೆಯುವಂತೆ ಮಾಡುವ ಅಪರೂಪದ ಹಾರ್ಮೋನು ಈ ಸೆರಟೋನಿನ್! ಸಂಗಾತಿಯನ್ನು ಮರೆಯಗೊಡದೇ ಪದೇ ಪದೇ ನೆನಪಿಸುವಂತೆ ಮಾಡುವ ಈ ಹಾರ್ಮೋನನ್ನು ಪ್ರೇಮಿಗಳು ಅದೆಷ್ಟು ಹೊಗಳುತ್ತಾರೋ...ಅದೆಷ್ಟು ತೆಗಳುತ್ತಾರೋ! ಸೆರಟೋನಿನ್ ಪ್ರಮಾಣ, ಜನ ಸಾಮಾನ್ಯರ ಮಿದುಳಿನಲ್ಲಿರುವ ಪ್ರಮಾಣಕ್ಕಿಂತ, ಪ್ರೇಮಿಗಳಲ್ಲಿ ಕಡಿಮೆಯಾದಾಗ ಇಂತಹ ಸವಿನೆನಪಿನ ಭಾವನೆಗಳು ಕಾಡುತ್ತವೆ. ಚಂದ್ರನ ತಂಬೆಳದಿಂಗಳೂ ಸಹಾ ಕಾದು ಸುಡುವ ಬಿರುಬಿಸಿಲಿನ ಅನುಭವವನ್ನು ತರುತ್ತದೆ.

ಹುಚ್ಚು:

ಪ್ರೀತಿಯೆನ್ನುವುದು ದ್ವಿಮುಖವಾಗಿದ್ದಾಗ ಎಲ್ಲವೂ ಚೆನ್ನಾಗಿರುತ್ತದೆ. ಜೋಡಿಗಳು ತಮ್ಮದೇ ಆದ ಜಗತ್ತಿನಲ್ಲಿ ವಿಹರಿಸುತ್ತಾ ಮೈ ಮರೆಯುತ್ತಾರೆ. ಇದೇ ಪ್ರೀತಿ ಏಕಮುಖವಾಗಿದ್ದಾಗ, ಹುಡುಗ ಅಥವ ಹುಡುಗಿಯಲ್ಲಿ ಮಾತ್ರ ಕಾಣಿಸಿಕೊಂಡಾಗ-ಸಂಗಾತಿಯ ಬಳಿ ಹೋಗಿ ‘ಐ ಲವ್ ಯು‘ ಎಂದಾಗ ‘ಏನು? ನೀನು ಪ್ರೀತಿಸ್ತೀಯ...ನಿನಗೇನು ಹುಚ್ಚು ಹಿಡಿದಿ ತಾನೇ‘ ಎಂದು ಪ್ರಶ್ನೆ ಕೇಳಿದಾಗ, ಪ್ರೀತಿ ಎನ್ನುವುದು ನಿಜಕ್ಕೂ ಹುಚ್ಚೇ ಎಂಬ ಪ್ರಶ್ನೆ ನಮ್ಮ ಮನಸ್ಸಿನಲ್ಲಿ ಏಳುತ್ತದೆ.

ಹೌದು. ಪ್ರೀತಿ ಎನ್ನುವುದು ಹುಚ್ಚು. ಕೇವಲ ಹುಚ್ಚು ಮಾತ್ರವಲ್ಲ, ಅದೊಂದು ಗೀಳು ಹೌದು. ಪ್ರೀತಿಯು ಅಬ್ಸಸಿವ್ ಕಂಪಲ್ಸಿವ್ ಡಿಸಾರ್ಡರ್ ಎಂಬ ಗೀಳು ರೋಗವನ್ನು ಹೋಲುತ್ತದೆ.

ಡಾ.ಡೊನಟೆಲ್ಲ ಮರಾಜ಼್ಜಿತಿ ಅವರು, ಇಟಲಿಯ ಪೀಸಾ ವಿಶ್ವವಿದ್ಯಾನಿಲಯದಲ್ಲಿ ಮನೋವೈದ್ಯರಾಗಿ ಕೆಲಸ ಮಾಡುತ್ತಿರುವರು. ಇವರು ಪ್ರೀತಿಯ ಎರಡನೆಯ ಹಂತದಲ್ಲಿದ್ದ ೨೦ ಜೋಡಿಗಳನ್ನು ಕರೆದರು. ಈ ಜೋಡಿಗಳು ಪ್ರೀತಿಯ ಎರಡನೆಯ ಹಂತದಲ್ಲಿ ೬ ತಿಂಗಳ ಕಾಲವನ್ನಷ್ಟೇ ಕಳೆದಿದ್ದರು. ಹಾಗಾಗಿ ಇವರು ತಮ್ಮ ಸಂಗಾತಿಯನ್ನು ಪದೇ ಪದೇ ನೆನಪಿಸಿಕೊಂಡು, ವಿರಹವನ್ನು ಅನುಭವಿಸುತ್ತಾ, ಪ್ರೀತಿಯ ನೊವಿನ ಮುಖವನ್ನು ಸವಿಯುತ್ತಾ, ಕಾಲ ಕಳೆಯುತ್ತಿದ್ದರು.

ಗೀಳು ರೋಗಕ್ಕೆ ತುತ್ತಾದವರು, ಒಂದು ನಿರ್ದಿಷ್ಟ ಕೆಲಸವನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಉದಾಹರಣೆಗೆ ಕೈ ತೊಳೆಯುವ ಗೀಳು. ಈ ಗೀಳಿಗೆ ತುತ್ತಾದವರು ತಮ್ಮ ಕೈಗಳನ್ನು ಪದೇ ಪದೇ ತೊಳೆಯುತ್ತಾರೆ. ಎಷ್ಟು ಸಲ ಸೋಪು ಹಾಕಿ ತೊಳೆದರೂ ಅವರಿಗೆ ಸಮಾಧಾನವಿರುವುದಿಲ್ಲ. ದಿನಕ್ಕೆ ಹತ್ತಲ್ಲ ಇಪ್ಪತ್ತಲ್ಲ ಐವತ್ತು ಅರವತ್ತು ಬಾರಿಯಾದರೂ ಕೈಗಳನ್ನು ತೊಳೆಯುತ್ತಲೇ ಇರುತ್ತಾರೆ. ಸಂಪ್ರದಾಯಸ್ತ ಮನೆಯಲ್ಲಿ ಹುಟ್ಟಿದ ಓರ್ವ ಗೃಹಿಣಿಯನ್ನು ಕೈಯನ್ನು ಪರಪುರುಷನೊಬ್ಬ ಹಿಡಿದೆಳೆದನು. ಪರಪುರುಷ ಮುಟ್ಟಿದ ತನ್ನ ಕೈ ‘ಅಪವಿತ್ರ‘ವಾಯಿತೆಂಬ ಭಾವನೆ ಆಕೆಗೆ. ತನ್ನ ಕೈಗಳನ್ನು ಪದೇ ಪದೇ ತೊಳೆದು ಪವಿತ್ರಗೊಳಿಸಲು ಆಕೆ ಪ್ರಯತ್ನಿಸುತ್ತಿರುತ್ತಾಳೆ. ಎಷ್ಟು ತೊಳೆದರೂ ಆಕೆಗೆ ಸಮಾಧಾನವಾಗದು. ಇಂತಹ ಗೀಳು ರೋಗಗಳಿಂದ ನರಳುವವರ ಮಿದುಳನ್ನು ಪರೀಕ್ಷಿಸಿದಾಗ ಅವರ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಸಾಮಾನ್ಯ ಜನರಿಗಿಂತ ಕಡಿಮೆಯಿತ್ತು. ವೈದ್ಯರು ಕೈ ತೊಳೆಯುವ ಗೀಳಿಗೆ ಕಡಿಮೆ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಕಡಿಮೆಯಾಗಿರುವೇ ಕಾರಣ ಎಂ ಬ ತೀರ್ಮಾನಕ್ಕೆ ಬಂದರು. ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣವನ್ನು ಹೆಚ್ಚಿಸುವಂತಹ ಔಷಧಗಳನ್ನು ನೀಡಿದರು. ಇದರಿಂದ ಗೀಳು ಕಡಿಮೆಯಾಗುವುದನ್ನು/ಪೂರ್ಣ ಗುಣವಾಗುವುದನ್ನು ಗಮನಿಸಿದರು.

ಡೊನಟೆಲ್ಲ ಅವರು ೨೦ ಜೋಡಿಗಳನ್ನು ಕರೆಸಿ ಅವರ ಮಿದುಳನ್ನು ಅಧ್ಯಯನ ಮಾಡಿದರು. ಅವರ ಮಿದುಳಿನಲ್ಲಿಯೂ ಸೆರಟೋನಿನ್ನಿನ ಪ್ರಮಾಣ, ಗೀಳುರೊಗಕ್ಕೆ ತುತ್ತಾಗಿದ್ದವರ ಮಿದುಳಿನಲ್ಲಿ ಸೆರಟೋನಿನ್ ಪ್ರಮಾಣ ಎಷ್ಟಿತ್ತೋ ಸರಿಸುಮಾರು ಅಷ್ಟೇ ಪ್ರಮಾಣದಲ್ಲಿತ್ತು!

ಪ್ರೀತಿ ಕುರುಡು:

ಪ್ರೀತಿ ಕುರುಡು ಎನ್ನುವ ಮಾತಿದೆ. ಪ್ರೀತಿಯಲ್ಲಿ ತೇಲುತ್ತಿರುವವರು ಕುರುಡರು ಮಾತ್ರವಾಗಿರುವುದಿಲ್ಲ, ಕಿವುಡರೂ ಆಗಿರುತ್ತಾರೆ, ತಿಳಿಗೇಡಿಗಳೂ ಆಗಿರುತ್ತಾರೆ ಎಂದು ಹಿರಿಯರು ಗೊಣಗುವುದನ್ನು ನವು ಕೇಳಿದ್ದೇವೆ. ಇದು ವಾಸ್ತವದಲ್ಲಿ ನಿಜ. ಈ ಹಾರ್ಮೋನುಗಳು ಎಂತಹ ಮೋಡಿಯನ್ನು ಮಾಡಿರುತ್ತದೆಯೆಂದರೆ, ಹುಡುಗನಿಗೆ ತನ್ನ ಹುಡುಗಿಯಷ್ಟು ಸುಂದರಿ ಈ ಜಗತ್ತಿನಲ್ಲಿ ಮತ್ತೊಬ್ಬಳಿಲ್ಲ ಎನ್ನಿಸುತ್ತದೆ. ಹುಡುಗಿಗೆ, ತಮ್ಮದು ಜನ್ಮ ಜನ್ಮದ ಅನುಬಂಧ ಎಂದು ನಂಬಿಕೊಂಡಿರುತ್ತಾಳೆ. ಇಂತಹ ಸಂಗಾತಿ ದೊರೆತದ್ದು ತನ್ನ ಪೂರ್ವ ಜನ್ಮದ ಸುಕೃತ ಎಂದು ತಿಳಿದಿರುತ್ತಾರೆ. ತಾವು ‘ಮೇಡ್ ಫಾರ್ ಈಚ್ ಅದರ್‘ ಎಂದು ಭಾವಿಸಿರುತ್ತಾರೆ. ಸಂಗಾತಿಯಲ್ಲಿರುವ ಬೆಟ್ಟ ಗುಡ್ಡದಷ್ಟು ದೊಡ್ಡದಾದ ಅರೆಕೊರೆಗಳು ಅವರಿಗೆ ಕಾಣುವುದೇ ಇಲ್ಲ. ಸಾಸಿವೆಯಂತಹ ಸಣ್ಣ ಪುಟ್ಟ ಒಳ್ಳೆಯ ಗುಣಗಳು ಕುಂಬಳಕಾಯಿಯಷ್ಟು ದೊಡ್ಡದಾಗಿ ಕಾಣುತ್ತವೆ. ಆ ಗುಣಗಳನ್ನು ಅವರು ಹೊಗಳಿದ್ದೇ ಹೊಗಳಿದ್ದು!

ಪ್ರೇಮಿಗಳ ಮಿದುಳಿನಲ್ಲಿ ಸೆರಟೋನ್ನಿನ ಪ್ರಮಾಣ ಕಡಿಮೆಯಾಗಿ, ಎಲ್ಲೆಡೆ ಡೋಪಮಿನ್ ಹಾರ್ಮೋನಿನ ಸಾಮ್ರ್ಯಾಜ್ಯವೇ ನಡೆಯುತ್ತಿರುವ ಕಾರಣ, ಎಲ್ಲವೂ ಎಷ್ಟು ಸುಂದರವೆನಿಸುತ್ತದೆ. ಅವರಿಗೆ ಈ ಜಗತ್ತು ಸುಖಮಯವಾಗಿ ಕಾಣುತ್ತದೆ. ಈ ಅವಧಿಯಲ್ಲಿ ಮಿದುಳಿನ ತಾರ್ಕಿಕ ಭಾಗ, ಸಮಾಜದ ಕರಾಳ ಮುಖದ ಬಗ್ಗೆ ಎಚ್ಚರಿಕೆಯನ್ನು ನೀಡುವ ನೇತ್ಯಾತ್ಮಕ ಭಾಗ ಎಲ್ಲವೂ ಸದ್ದಿಲ್ಲದಂತೆ ನಿಗ್ರಹಗೊಂಡಿರುತ್ತವೆ.

ಪ್ರೀತಿಯ ಮೂರನೆಯ ಹಂತಕ್ಕೆ ಕಾಲಿಡಲು ಇಂತಹ ಭ್ರಮೆ ಅಗತ್ಯ!

ಹಂತ ಮೂರು: ಭಾವಾನುಬಂಧ:

ಪ್ರೀತಿಯಲ್ಲಿ ಮುಳುಗಿದ ಪ್ರೇಮಿಗಳು ಎರಡನೆಯ ಹಂತವನ್ನು ಪರಿಪೂರ್ಣವಾಗಿ ಕ್ರಮಿಸಿದ ನಂತರ ಮೂರನೆಯ ಹಂತಕ್ಕೆ ಕಾಲಿಡುತ್ತಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಇದನ್ನು ‘ಮದುವೆ ಎನ್ನುತ್ತೇವೆ. ಆಧುನಿಕ ಸಮಾಜದಲ್ಲಿ ಇದು ‘ಲಿವ್ ಇನ್ ರಿಲೇಶನ್ ಶಿಪ್‘ ಆಗಬಹುದು ಅಥವ ಮತ್ತೊಂದಾಗಬಹುದು. ಒಟ್ಟಿನಲ್ಲಿ ಅವರು ಸಂತಾನವರ್ಧನೆಗೆ ಸಿದ್ಧರಾಗಿರುತ್ತಾರೆ.

ಜೋಡಿಯು ಪ್ರೇಮಿಗಳ ಪಟ್ಟದಿಂದ ಗೃಹಸ್ತ ಪಟ್ಟವನ್ನೇರಲು, ಮದುವೆಯಾಗಿ ಮಕ್ಕಳನ್ನು ಹೆರಲು, ಹೆತ್ತ ಮಕ್ಕಳನ್ನು ಸಮಾಜದ ಒಳ್ಳೆಯ ಪ್ರಜೆಗಳನ್ನಾಗಿ ಸಾಕಲು ನಮ್ಮ ದೇಹದಲ್ಲಿರುವ ಎರಡು ಹಾರ್ಮೋನುಗಳು ಪ್ರಧಾನ ಪಾತ್ರವಹಿಸುತ್ತವೆ ಎಂದು ಭಾವಿಸಲಾಗಿದೆ. ಆಕ್ಸಿಟೋಸಿನ್ ಮತ್ತು ವ್ಯಾಸೊಪ್ರೆಸ್ಸಿನ್ ಅವುಗಳ ಹೆಸರು.

ಆಕ್ಸಿಟೋಸಿನ್: ಇದೊಂದು ಶಕ್ತಿಶಾಲಿ ಹಾರ್ಮೋನು. ಇದು ಸ್ತ್ರೀ-ಪುರುಷರಿಬ್ಬರಲ್ಲೂ ಇರುತ್ತದೆ. ಸಂಭೋಗದ ಅಂತಿಮದಲ್ಲಿ ದೊರೆಯುವ ರತ್ಯಾನಂದಕ್ಕೆ (ಆರ್ಗಸಂ) ಈ ಹಾರ್ಮೋನೇ ಕಾರಣ. ಯಾವ ಜೋಡಿ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಾರೋ, ಅವರು ಪದೇ ಪದೇ ಸಂಭೋಗದಲ್ಲಿ ತೊಡಗುತ್ತಾರೆ. ಆಗ ಅವರಲ್ಲಿ ಆಕ್ಸಿಟೋಸಿನ್ ಪದೇ ಪದೇ ಬಿಡುಗಡೆಯಾಗುತ್ತದೆ. ಆಕ್ಸಿಟೋಸಿನ್ ಕೇವಲ ಸಂಭೋಗಾವಧಿಯಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎಂದರೆ ತಪ್ಪಾಗುತ್ತದೆ. ಸಂಗಾತಿಗಳು ಒಬ್ಬರನ್ನೊಬ್ಬರು, ಮುಟ್ಟಿದಾಗ, ಅಪ್ಪಿಕೊಂಡಾಗ, ಚುಂಬಿಸಿದಾಗಲೂ ಈ ಹಾರ್ಮೋನ್ ಬಿಡುಗಡೆಯಾಗುತ್ತದೆ. ಸಂಗಾತಿಯ ಭಾವಚಿತ್ರವನ್ನು ನೋಡುವಾಗಲೂ ಸಹ ಈ ಹಾರ್ಮೋನ್ ಬಿಡುಗಡೆಯಾಗಿ ಮಧುರ ಭಾವಗಳು ಹೊರಸೂಸಲು ಕಾರಣವಾಗುತ್ತದೆ. ಇದು ಜೋಡಿಗಳ ನಡುವೆ ಪ್ರೀತಿ-ನಂಬಿಕೆ-ವಿಶ್ವಾಸವನ್ನು ವರ್ಧಿಸುವ ಹಾರ್ಮೋನು. ಹೀಗೆ ಈ ಹಾರ್ಮೋನು ಜೋಡಿಗಳ ನಡುವೆ ದೀರ್ಘಕಾಲಿಕ ಅನುಬಂಧಕ್ಕೆ ಬುನಾದಿಯನ್ನು ಹಾಕುತ್ತದೆ. ಈ ಹಾರ್ಮೋನೇ ದೀರ್ಘಕಾಲದ ಯಶಸ್ವಿ ದಾಂಪತ್ಯದ ಗುಟ್ಟು. ಆಕ್ಸಿಟೋಸಿನ್ ಹಾರ್ಮೋನ್ ಪ್ರಸವಾವಧಿಯಲ್ಲಿ ಬಿಡುಗಡೆಯಾಗುತ್ತದೆ. ಇದನ್ನು ಪ್ರಸವೋತ್ಕರ್ಷಕ ಹಾರ್ಮೋನು ಎಂದೂ ಕರೆಯಬಹುದು. ಈ ಹಾರ್ಮೋನು ತಾಯಿ-ಮಗುವಿನ ಬಂಧವನ್ನು ಬಿಗಿಗೊಳಿಸುತ್ತದೆ. ತಾಯಿಯು ತನ್ನ ಮಗುವಿಗೆ ಪ್ರತಿ ಸಲ ಹಾಲನ್ನು ಕುಡಿಸುವಾಗ ಈ ಹಾರ್ಮೋನು ಉತ್ಪಾದನೆಯಾಗುತ್ತದೆ. ಇದರಿಂದ ತಾಯಿ-ಮಗುವಿನ ಬಂಧ ಬಲಗೊಳ್ಳುತ್ತಾ ಹೋಗುತ್ತದೆ. ಡಯಾನ್ ವಿಟ್ ಎಂಬ ನ್ಯೂಯಾರ್ಕಿನ ಮನಃಶಾಸ್ತ್ರ ಸಹ-ಪ್ರಾಧ್ಯಾಪಕರು ಇಲಿ ಹಾಗು ಕುರಿಗಳ ಮೇಲೆ ಒಂದು ಪ್ರಯೋಗವನ್ನು ಮಾಡಿದರು. ತಾಯಿ ಇಲಿ/ತಾಯಿ ಕುರಿಯ ಮಿದುಳಲ್ಲಿ ಆಕ್ಸಿಟೋಸಿನ್ ಉತ್ಪಾದನೆಯಾಗದಂತೆ ಕೃತಕವಾಗಿ ತಡೆಗಟ್ಟಿದರು. ಅದರ ಫಲವಾಗಿ ಇವು ತಮ್ಮ ಮರಿಗಳಿಗೆ ಹಾಲನ್ನು ಕುಡಿಸಲಿಲ್ಲ. ತಮ್ಮ ಮರಿಗಳ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಲಿಲ್ಲ. ತಾಯಿ ಇದ್ದೂ ಮರಿಗಳು ಅನಾಥವಾದವು. ಇವರು ಮತ್ತೊಂದು ಪ್ರಯೋಗವನ್ನು ಮಾಡಿದರು. ಎಂದೂ ಸಂಭೋಗದಲ್ಲಿ ತೊಡಗದ ಹೆಣ್ಣು ಇಲಿ/ಕುರಿಗೆ ಆಕ್ಸಿಟೋಸಿನ್ ಇಂಜಕ್ಷನ್ನನ್ನು ಕೃತಕವಾಗಿ ನೀಡಿದರು. ಆಗ ಆ ಇಲಿ-ಕುರಿಗಳು, ಇತರ ಇಲಿ-ಕುರಿಗಳು ಹೆತ್ತ ಸಂತಾನವನ್ನು ತನ್ನ ಸಂತಾನವೇನೋ ಎಂಬಂತೆ ಭಾವಿಸಿ, ಹೆತ್ತ ತಾಯಿಯಂತೆ, ಆ ಅನ್ಯ ಮರಿಗಳ ಆರೈಕೆ-ಕಾಳಜಿಯನ್ನು ವಹಿಸಿದವು. ಅಂದರೆ... ತಾಯ್ತನದ ಗುಟ್ಟು ಆಕ್ಸಿಟೋಸಿನ್ ಹಾರ್ಮೋನಿನಲ್ಲಿದೆ ಎಂದು ಹೇಳಬಹುದು.

ವ್ಯಾಸೋಪ್ರೆಸಿನ್: ಇದು ಜೋಡಿಗಳ ನಡುವಿನ ಅನುಬಂಧ ದೀರ್ಘಕಾಲ ಉಳಿಯಲು ನೆರವಾಗುವ ಮತ್ತೊಂದು ಪ್ರಮುಖ ಹಾರ್ಮೋನು. ಇದನ್ನು ಪ್ರತಿಮೂತ್ರಕಾರಕ ಹಾರ್ಮೋನು (ಆಂಟಿ ಡೈಯೂರೆಟಿಕ್ ಹಾರ್ಮೋನ್) ಎಂದು ಕರೆಯುವರು. ವ್ಯಾಸೋಪ್ರೆಸಿನ್ ಮೂತ್ರಪಿಂಡಗಳ ಮೇಲೆ ಪ್ರಭಾವವನ್ನು ಬೀರಿ, ಮೂತ್ರೋತ್ಪಾದನಾ ಪ್ರಮಾಣವನ್ನು ನಿಯಂತ್ರಿಸುತ್ತದೆ; ತನ್ಮೂಲಕ ನಮ್ಮ ದಾಹವನ್ನೂ ನಿಯಂತ್ರಿಸುತ್ತದೆ. ಇದು ಸಂಭೋಗದ ನಂತರ ಬಿಡುಗಡೆಯಾಗುತ್ತದೆ. ವ್ಯಾಸೋಪ್ರೆಸಿನ್-ನ ಮಹತ್ವವನ್ನು ತಿಳಿಯಲು ವಿಜ್ಞಾನಿಗಳು ಪ್ರೆಯರಿ ವೋಲ್ ಎಂಬ ಜೀವಿಗಳ ಮೇಲೆ ಪ್ರಯೋಗವನ್ನು ಮಾಡಿದರು. ಪ್ರೆಯರಿ ವೋಲ್ (ಮೈಕ್ರೋಟಸ್ ಓಕ್ರೋಗ್ಯಾಸ್ಟರ್) ಎನ್ನುವುದು ಮೂಷಕ ಜಾತಿಗೆ ಸೇರಿದ ಜೀವಿ. ನಮ್ಮ ಸಾಧಾರಣ ಇಲಿಗಿಂತ ದಪ್ಪಕ್ಕಿರುತ್ತದೆ. ಮೈಮೇಲಿನ ಕೂದಲು ಕಂದು ಬಣ್ಣಕ್ಕಿದ್ದರೆ, ಹೊಟ್ಟೆಯ ಕೆಳಗಿನ ಭಾಗ ಹಳದಿ ಬಣ್ಣಕ್ಕಿರುತ್ತದೆ. ಅಮೆರಿಕದಲ್ಲಿ ಹೆಚ್ಚು ಕಂಡುಬರುತ್ತದೆ. ವೋಲ್ ಸಂಘಜೀವಿ. ಅನೇಕ ಲಕ್ಷಣಗಳಲ್ಲಿ ಮನುಷ್ಯರನ್ನು ಹೋಲುತ್ತದೆ. ಒಂದು ಗಂಡು ವೋಲ್-ಒಂದು ಹೆಣ್ಣುಲ್ ತಮ್ಮ ಜೀವನ ಪರ್ಯಂತ ಸಂಗಾತಿಗಳಾಗಿರುತ್ತವೆ. ನಾವು ನಮ್ಮ ಬದುಕಲ್ಲಿ ನಮಗೆ ಅಗತ್ಯವಾದ ಎರಡು ಮಕ್ಕಳನ್ನು ಪಡೆಯಲು ಎರಡು ಸಲ ಸಂಭೋಗವನ್ನು ನಡೆಸಿದರೆ ಸಾಕಾಗುತ್ತದೆ ಅಲ್ಲವೆ! ಉಳಿದ ಎಲ್ಲ ಸಮಯದಲ್ಲಿ ನಾವು ಸಂಭೋಗವನ್ನು ಮಾಡುವುದು ರತ್ಯಾನಂದಕ್ಕೋಸ್ಕರ! ನಮ್ಮ ಹಾಗೆಯೇ ಈ ವೋಲುಗಳೂ ಸಹ ಸಂತಾನಕ್ಕೆ ಅಗತ್ಯವಾದ ಪ್ರಮಾಣಕ್ಕಿಂತ ಹೆಚ್ಚು ಕಾಲ ಸಂಭೋಗದಲ್ಲಿ ತೊಡಗುತ್ತವೆ. ಸುಖಕ್ಕಾಗಿಯೇ ಸಂಭೋಗವನ್ನು ನಡೆಸುತ್ತವೆ. ಹೆಣ್ಣು ಗರ್ಭ ಕಟ್ಟಿದಾಗ, ಎರಡೂ ಒಟ್ಟಿಗೆ ಗೂಡನ್ನು ಕಟ್ಟುತ್ತವೆ. ಒಟ್ಟಿಗೆ ತಮ್ಮ ಮನೆಯನ್ನು (ಪ್ರದೇಶವನ್ನು) ಕಾಯುತ್ತವೆ. ಅಗುಂತಕರಿಗೆ ಪ್ರವೇಶಿಸಲು ಅವಕಾಶವನ್ನು ಮಾಡಿಕೊಡುವುದಿಲ್ಲ. ಹೆತ್ತ ಮರಿಗಳನ್ನು ಗಂಡು-ಹೆಣ್ಣು ಒಟ್ಟಿಗೆ ಸಾಕುತ್ತವೆ. ಬೆಳೆಸುತ್ತವೆ. ಹಾಗಾಗಿ ಇವುಗಳ ಬದುಕು ಬಹುಪಾಲು ಮನುಷ್ಯರ ಬದುಕನ್ನು ಹೋಲುತ್ತವೆ ಎನ್ನಬಹುದು. ವಿಜ್ಞಾನಿಗಳು ಒಂದು ಪ್ರಯೋಗವನ್ನು ಮಾಡಿದರು. ಗಂಡು ವೋಲ್‌ಗಳನ್ನು ಹಿಡಿದು ಅವುಗಳಿಗೆ ವ್ಯಾಸೋಪ್ರೆಸಿನ್ ನಿರ್ಬಂಧಕ ಚುಚ್ಚುಮದ್ದನ್ನು ನೀಡಿದರು. ಆ ಕ್ಷಣವೇ ಗಂಡು ತನ್ನ ಸಂಗಾತಿಯನ್ನು ಬಿಟ್ಟು ಬಿಟ್ಟಿತು. ಸಂಗಾತಿಯ ಕಡೆಗೆ ಕಣ್ಣೆತ್ತಿಯೂ ನೋಡಲಿಲ್ಲ. ಸದಾ ಕಾಲಕ್ಕೂ ಮರೆತುಹೋಯಿತು! ತನ್ನ ಸಂಗಾತಿಯನ್ನು ಮತ್ತೊಂದು ಗಂಡು ಕೆಣಕುತ್ತಿದ್ದರೂ ಸಹ, ಅದು ತನಗೆ ಸಆಂಬಂಧ ಪಡದ ವಿಷಯ ಎಂದು ಭಾವಿಸಿದಂತೆ ಸುಮ್ಮನಿತ್ತು! ಅವುಗಳ ಸಹಜ ಗುಣಗಳಾದ ಸಂಗಾತಿ ರಕ್ಷಣೆ ಹಾಗೂ ಆಕ್ರಮಣಶೀಲತೆಯನ್ನು ಮರೆತು ಹೋಗಿತ್ತು. ಈ ಪ್ರಯೋಗಗಳಿಂದ, ವ್ಯಾಸೋಪ್ರೆಸಿನ್ ಹಾರ್ಮೋನು ಜೋಡಿಗಳ ನಡುವೆ ದೀರ್ಘಕಾಲಿಕ ಅನುಬಂಧ ಏರ್ಪಡಲು ಪ್ರಮುಖ ಕಾರಣ ಎಂಬ ತೀರ್ಮಾನಕ್ಕೆ ಬಂದರು.

ಲೀಲೆ:

ಬೇಂದ್ರೆಯವರು ಪ್ರೀತಿಯ ಮೌಲ್ಯವನ್ನು ಅರಿಯಲಿ ಎಷ್ಟು ಜನ್ಮಗಳನ್ನು ಎತ್ತಿದರೂ ಸಾಲದು ಎಂದು ಹೇಳಲಿ. ಕೆ.ಎಸ್.ನ ಅವರು ದಾಂಪತ್ಯದ ನವಿರಾದ ಭಾವಗಳನ್ನು ಎಷ್ಟೇ ಸೊಗಸಾಗಿ ಕಟ್ಟಿಕೊಡಲಿ, ಕುವೆಂಪು ಅವರು ಪ್ರೇಮಕಾಶ್ಮೀರವನ್ನೇ ಧರೆಗಿಳಿಸಲಿ, ಓರ್ವ ವಿಜ್ಞಾನಿಗೆ ಪ್ರೀತಿ ಎನ್ನುವುದು ಬರೀ ಹಾರ್ಮೋನುಗಳ ಲೀಲೆ! ರಾಸಯನಿಕ ವಸ್ತುಗಳ ಜಾಲ!

ಎಲ್ಲಿಯವರೆಗೆ ನಮ್ಮ ಮಿದುಳಿನಲ್ಲಿ ಈ ರಾಸಾಯನಿಕ ವಸ್ತುಗಳು (ಹಾರ್ಮೋನುಗಳು) ಉತ್ಪಾದನೆಯಾಗುತ್ತಿದ್ದು ತಮ್ಮ ಕೆಲಸ ಕಾರ್ಯಗಳನ್ನು ಪರಿಪೂರ್ಣವಾಗಿ ನಡೆಸುತ್ತಿರುತ್ತವೆಯೋ, ಅಲ್ಲಿಯವರೆಗೆ ಅಮರ ಪ್ರೇಮ ಗಾಥೆ ಸರಾಗವಾಗಿ ಸಾಗುತ್ತಿರುತ್ತದೆ. ಈ ರಾಸಾಯನಿಕಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು, ಆಗ ಪ್ರೇಮ ಮಧುರಾಕ್ಷರ...ಪ್ರೇಮ ಅಜರಾಮರ ಎನ್ನುವುದು ಸುಳ್ಳಾಗುತ್ತದೆ. ಜೋಡಿಗಳಲ್ಲಿ ಅಪಶೃತಿ ಕೇಳಿ ಬರಲಾರಂಭಿಸುತ್ತದೆ. ಆಗ ಈ ರಾಸಾಯನಿಕಗಳು ಮತ್ತೆ ಸಹಜ ಕೆಲಸ ಕಾರ್ಯ ಮಾಡುವಂತೆ ವರ್ತಿಸುವುದು ಗಂಡು-ಹೆಣ್ಣು ಇಬ್ಬರ ಕೈಯಲ್ಲಿ ಇರುತ್ತದೆ. ಹಾಗಾಗಿ ಪ್ರೇಮಿಗಳು ಪ್ರೀತಿಯ ವೈಜ್ಞಾನಿಕ ಮುಖವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು. ಹೆತ್ತವರೂ ಸಹಾ ಹಾರ್ಮೋನುಗಳ ಲೀಲೆಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂಬ ಅಂಶವನ್ನು ಮತ್ತೆ ಒತ್ತಿ ಹೇಳಬೇಕಾಗಿಲ್ಲವಷ್ಟೆ!

ಔಷಧಿ:

ಪ್ರೀತಿ ಎನ್ನುವುದು ಹಾರ್ಮೋನುಗಳ ಲೀಲೆ ಎನ್ನುವುದನ್ನು ಒಪ್ಪೋಣ. ಈಗ ಕೆಲವು ಪ್ರಶ್ನೆಗಳು ದೈತ್ಯಾಕಾರವನ್ನು ತಳೆದು ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ.

ಆಕ್ಸಿಟೋಸಿನ್ ಇಂಜಕ್ಷನ್ ನೀಡಿ, ಒಂದೇ ಒಂದು ಸಲವೂ ಸಂಭೋಗದಲ್ಲಿ ತೊಡಗದ ಇಲಿಯಲ್ಲಿ ತಾಯ್ತನದ ಭಾವವನ್ನು ವಿಜ್ಞಾನಿಗಳು ಮೂಡಿಸಿದರು.

ವೋಲ್ ದಂಪತಿಗಳಲ್ಲಿ ಗಂಡು ವೋಲಿಗೆ ವ್ಯಾಸೋಪ್ರೆಸಿನ್ ರೋಧಕ ಚುಚ್ಚು ಮದ್ದನ್ನು ನೀಡಿ ಅವುಗಳ ನಡುವಿನ ಅನುಬಂಧವನ್ನು ಸದಾ ಕಾಲಕ್ಕೂ ಮುರಿದರು.

ಮಿದುಳಲ್ಲಿ ಸೆರಟೋನ್-ನನ್ನು ಹೆಚ್ಚಿಸುವ ಗುಳಿಗೆಗಳು ಇಂದು ದೊರೆಯುತ್ತಿವೆ. ಡೋಪಮಿನ್ ಉತ್ಪಾದನೆಯನ್ನು ಹೆಚ್ಚಿಸುವ ಔಷಧಗಳೂ ಸಿಗುತ್ತಿವೆ.

ಈ ಔಷಧಗಳನ್ನು ನೀಡಿ, ಅಪ್ಪ -ಅಮ್ಮಂದಿರು ಕಾಲೇಜು ಓದುತ್ತಿರುವ ತಮ್ಮ ಮಗಳ ಮೇಲೆ ಆವರಿಸಿರುವ ಪ್ರೀತಿಯ ಭೂತವನ್ನು ಬಿಡಿಸಬಹುದೆ? ಗಂಡ-ಹೆಂಡಿರ ನಡುವೆ ಅಂತಹ ಹೊಂದಾಣಿಕೆಯಿಲ್ಲ ಎನ್ನುವವರಿಗೆ ಡೋಪಮಿನ್ ವರ್ಧಕ ಔಷಧವನ್ನು ನೀಡಿ ಅವರ ದಾಂಪತ್ಯವನ್ನು ವರ್ಧಿಸಬಹುದೆ? ಹೀಗೆ...ಪ್ರೀತಿಯ ನಾನಾ ಮುಖಗಳನ್ನು ಔಷಧಗಳಿಂದ (ಪ್ರೀತಿ ಎನ್ನುವುದು ರಾಸಾಯನಿಕ ವಸ್ತುಗಳ ಲೀಲೆ ಎಮ್ದು ನಾವೇ ಹೇಳಿದ್ದೇವಲ್ಲ!!!) ನಿಯಂತ್ರಿಸಬಹುದೆ?

ಈ ಬಗ್ಗೆ ಯಾರಾದರೂ ಸಂಶೋಧನೆಯನ್ನು ಮಾಡಿದ್ದಾರೆಯೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಈ ಲೇಖನವನ್ನು ಓದಿ, ನಮಗೂ ಈ ಔಷಧಗಳನ್ನು ಬರೆದುಕೊಡಿ ಎಂದು ದಯವಿಟ್ಟು ನನ್ನನ್ನು ಕೇಳಬೇಡಿ. ನಿಮ್ಮ ಪ್ರೀತಿ-ಪ್ರೇಮ ವರ್ಧನೆಗೆ ಇಲ್ಲವೇ ಮರ್ಧನೆಗೆ ನಾನು ಈ ಔಷಧಗಳನ್ನು ಸಲಹೆ ಮಾಡಲಾರೆ. ಏಕೆಂದರೆ, ಈ ಹಾರ್ಮೋನುಗಳ ಜೊತೆ, ಇನ್ನೂ ನಮ್ಮ ವಿಜ್ಞಾನದ ತಿಳಿವಿಗೆ ಬಾರದಂತಹ ಇನ್ನೂ ಅನೇಕ ವಿಷಯಗಳಿವೆ ಎಂಬ ಗುಮಾನಿ ನನ್ನದು. ಹಾಗಾಗಿ ಈ ಔಷಧಿಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳುವ ದುಃಸಾಹಸಕ್ಕೆ ಹೋಗಬೇಡಿ.

ಗುಟ್ಟು:

ಇಬ್ಬರ ನಡುವೆ ಪ್ರೀತಿ-ಪ್ರೇಮ ಬೆಳೆಯಬೇಕೆ?

ನ್ಯೂಯಾರ್ಕಿನ ಮನಃಶಾಸ್ತ್ರಜ್ಞ ಆರ್ಥರ್ ಅರುಣ್ ಮಾಡಿದಂತಹ ಪ್ರಯೋಗವನ್ನು ನಿಮಗೆ ಹೇಳುತ್ತೇನೆ. ಇದನ್ನು ಬೇಕಾದರೆ ನೀವು ಪ್ರಯೋಗಿಸಿ ನೋಡಬಹುದು.

ಆರ್ಥರ್ ಅರುಣ್ ಅವರು ಅಪರಿಚಿತ ಯುವಕ ಯುವತಿಯರನ್ನು ಒಂದೆಡೆ ಕಲೆಹಾಕಿದರು. ನಂತರ ತಮ್ಮ ಪ್ರಯೋಗದಲ್ಲಿ ಭಾಗಿಯಾಗುವಂತೆ ಕೇಳಿಕೊಂಡರು. ನಂತರ ಅವರು ಈ ಕೆಳಗಿನ ಮೂರು ಹಂತಗಳನ್ನು ಕ್ರಮಬದ್ಧವಾಗಿ ಪಾಲಿಸುವಂತೆ ಹೇಳಿದರು.

ಮೊದಲ ಹಂತದಲ್ಲಿ ಸಂಪೂರ್ಣವಾಗಿ ಅಪರಿಚಿತವಾಗಿರುವ ವ್ಯಕ್ತಿಯನ್ನು ಭೇಟಿಯಾಗಬೇಕಾಗಿತ್ತು.

ಎರಡನೆಯ ಹಂತದಲ್ಲಿ ಇಬ್ಬರು ತಮ್ಮ ಬಗ್ಗೆ ಖಾಸಗೀ ವಿಷಯಗಳನ್ನು ಅರ್ಧ ಗಂಟೆ ಮಾತುಕತೆಯ ಮೂಲಕ ಹಂಚಿಕೊಳಬೇಕಿತ್ತು.

ಆ ನಂತರ....ಅವರಿಬ್ಬರೂ ನಿರಂತರವಾಗಿ, ಎಡೆಬಿಡದೆ, ಜಗತ್ತಿನ ಪರಿವೆಯನ್ನು ಪೂರ್ಣ ಮರೆತು, ಒಬ್ಬರ ಕಣ್ಣಲ್ಲಿ ಒಬ್ಬರು ಕಣ್ಣಿಟ್ಟು, ಪೂರ್ಣ ನಾಲ್ಕು ನಿಮಿಷಗಳ ಕಾಲ ದಿಟ್ಟಿಸಿ ನೋಡಬೇಕಿತ್ತು!

೩೪ ನಿಮಿಷಗಳ ನಂತರ....

ಆರ್ಥರ್ ಅರುಣ್ ಅವರ ಪ್ರಯೋಗದಲ್ಲಿ ಭಾಗಿಯಾಗಿದ್ದವರು, ತಾವು ಪ್ರಯೊಗದಲ್ಲಿ ಭಾಗಿಯಾಗಿದ್ದ ತಮ್ಮ ಸಂಗಾತಿಯತ್ತ ನಿಜಕ್ಕೂ ಆಕರ್ಷಿತರಾಗಿದ್ದೇವೆ ಎಂದು ಒಪ್ಪಿಕೊಂಡರು. ಒಂದು ಜೋಡಿಯಂತೂ, ಆರ್ಥರ್ ಅರುಣ್ ಅವರ ಪ್ರಯೋಗಾಲಯದಿಂದ ನೇರ ಹೊರಟು ಒಬ್ಬರನ್ನೊಬ್ಬರು ಮದುವೆಯಾದರು!
-curtsy naasomeswara

No comments:

Post a Comment